ಆತಿಶಿ ತಮ್ಮ 43ನೇ ವಯಸ್ಸಿನಲ್ಲಿ ಈ ಉನ್ನತ ಹುದ್ದೆಗೆ ಏರಿದ್ದಾರೆ. ಅಷ್ಟೇನೂ ಪ್ರಸಿದ್ಧರಲ್ಲದ ಮಹಿಳಾ ಲೀಡರ್ ಶಶಿಕಲಾ ಕಾಕೋಡ್ಕರ್ ಗೋವಾದ ಮೊದಲ ಸಿಎಂ ಆದದ್ದು 38ನೇ ವಯಸ್ಸಿನಲ್ಲಿ.
ಈವರೆಗಿನವರಲ್ಲಿ ಅವರೇ ಅತ್ಯಂತ ಕಿರಿಯ ಮಹಿಳಾ ಸಿಎಂ. ಬಿಎಸ್‌ಪಿ ನಾಯಕಿ ಮಾಯಾವತಿ 39ನೇ ವಯಸ್ಸಿನಲ್ಲಿ ಉತ್ತರ ಪ್ರದೇಶ ಸಿಎಂ ಹುದ್ದೆಗೆ ಏರಿದ್ದರು. 41 ನೇ ವಯಸ್ಸಿನಲ್ಲಿ ಒಡಿಶಾದ ಸಿಎಂ ಹುದ್ದೆಗೇರಿದ್ದವರು ಕಾಂಗ್ರೆಸ್‌ನ ನಂದಿನಿ ಸತ್ಪತಿ. 42ನೇ ವಯಸ್ಸಿನಲ್ಲಿ ಬಿಹಾರ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ. ಎಐಎಡಿಎಂಕೆಯ ಜಯಲಲಿತಾ 43ನೇ ವಯಸ್ಸಿನಲ್ಲಿ ತಮಿಳುನಾಡಿನ ಅತಿ ಕಿರಿಯ ಮತ್ತು ಮೊದಲ ಮಹಿಳಾ ಸಿಎಂ ಆದರು. ಬಿಜೆಪಿ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಉಮಾಭಾರತಿ 44ನೇ ವಯಸ್ಸಿನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾದರು. ಅಸ್ಸಾಮಿನ ಏಕೈಕ ಮಹಿಳಾ ಮತ್ತು ಮುಸ್ಲಿಮ್ ಸಿಎಂ ಎಂಬ ಹೆಗ್ಗಳಿಕೆಯಿರುವ ಅನ್ವರಾ ತೈಮೂರ್ ಆ ಹುದ್ದೆಗೇರಿದ್ದು 44ನೇ ವಯಸ್ಸಿನಲ್ಲಿ.
ದಿಲ್ಲಿಯ ನೂತನ ಸಿಎಂ ಆಗಿ ಆತಿಶಿ ಸಿಂಗ್ ಸೆಪ್ಟಂಬರ್ 21 ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ದಿಲ್ಲಿಯ ಮೂರನೇ ಮಹಿಳಾ ಸಿಎಂ ಆಗಿದ್ದಾರೆ. ಅಲ್ಲದೆ ಭಾರತದ ರಾಜಕೀಯದಲ್ಲಿ ಸಿಎಂ ಹುದ್ದೆಗೆ ಏರಿರುವ 17ನೇ ಮಹಿಳೆ ಅವರಾಗಿದ್ದಾರೆ.
ಅರವಿಂದ ಕೇಜ್ರಿವಾಲ್ ಸಂಪುಟದಲ್ಲಿನ ಏಕೈಕ ಮಹಿಳಾ ಮಂತ್ರಿಯಾಗಿದ್ದ ಆತಿಶಿ, ಸಂಪುಟ ಸೇರ್ಪಡೆಯಾದದ್ದೇ ಒಂದು ಬಿಕ್ಕಟ್ಟಿನ ಹೊತ್ತಲ್ಲಿ. ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ ದಿಲ್ಲಿ ಅಬಕಾರಿ ಹಗರಣದಲ್ಲಿ ಜೈಲುಪಾಲಾದಾಗ ಆತಿಶಿ ಅವರನ್ನು 2023ರ ಮಾರ್ಚ್‌ನಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಹಣಕಾಸು, ಶಿಕ್ಷಣ, ಲೋಕೋಪಯೋಗಿ, ನೀರಾವರಿ, ಇಂಧನ ಸೇರಿದಂತೆ 14 ಖಾತೆಗಳ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಮಿಂಚಿದ್ದವರು ಆತಿಶಿ.
2024ರ ಮಾರ್ಚ್‌ನಲ್ಲಿ ಕೇಜ್ರಿವಾಲ್ ಬಂಧನದಿಂದ ಸರಕಾರ ಮತ್ತು ಪಕ್ಷದಲ್ಲಿ ತಲೆದೋರಿದ ನಿರ್ವಾತವನ್ನು ತುಂಬಿದ್ದರು.
ದಿಲ್ಲಿಯಲ್ಲಿ ನೀರಿನ ಸಮಸ್ಯೆ ವೇಳೆ, ನೀರು ಬಿಡಲು ತಗಾದೆ ತೆಗೆದಿದ್ದ ಹರ್ಯಾಣ ಸರಕಾರದ ವಿರುದ್ಧ 10 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಡಳಿತಾತ್ಮಕ ವಿಚಾರದಲ್ಲಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸರಕಾರದ ವಿರುದ್ಧವೇ ಸಂಘರ್ಷಕ್ಕಿಳಿಯುವುದಕ್ಕೂ ಹಿಂಜರಿದಿರಲಿಲ್ಲ. ದಿಲ್ಲಿ ಸಿಎಂ ಹುದ್ದೆಯಲ್ಲಿ ಕೇಜ್ರಿವಾಲ್ ಅವರ ರಬ್ಬರ್ ಸ್ಟಾಂಪ್ ಆಗಲಿದ್ದಾರೆ ಎಂಬ ಬಿಜೆಪಿ ಆರೋಪವೇನೇ ಇದ್ದರೂ, ಅವರ ಈವರೆಗಿನ ಸಾಧನೆಗಳೇ ಅವರೇನು ಎಂಬುದನ್ನು ಹೇಳುತ್ತವೆ. ಮುಂದಿನ ವರ್ಷ ದಿಲ್ಲಿ ಚುನಾವಣೆ ನಡೆಯಲಿದ್ದು, ಐದು ತಿಂಗಳ ಕಾಲ ಆತಿಶಿ ದಿಲ್ಲಿ ಸರಕಾರದ ಸಾರಥ್ಯ ವಹಿಸುತ್ತಾರೆ.
ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ವಿಜಯ್ ಸಿಂಗ್ ಮತ್ತು ತ್ರಿಪ್ತಾ ವಾಹಿ ಅವರ ಪುತ್ರಿ ಆತಿಶಿ ಜನಿಸಿದ್ದು 1981ರ ಜೂನ್ 8ರಂದು. ಪಂಜಾಬಿ ಹಿನ್ನೆಲೆಯ ಕುಟುಂಬ. ದಿಲ್ಲಿ ವಿವಿ ಪದವೀಧರೆಯಾಗಿರುವ ಅವರು, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. 2013ರಲ್ಲಿ ಎಎಪಿ ಭಾಗವಾದ ಅವರು, ಆ ಸಲದ ವಿಧಾನಸಭೆ ಚುನಾವಣೆಯ ಹೊತ್ತಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಕರಡು ತಂಡದಲ್ಲಿ ಕೆಲಸ ಮಾಡಿದ್ದರು. 2015ರಲ್ಲಿ ಡಿಸಿಎಂ ಸಿಸೋಡಿಯಾ ಸಲಹೆಗಾರರ ತಂಡದಲ್ಲಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ವಿರುದ್ಧ ಸೋತರು. ಬಳಿಕ 2020ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ದಿಲ್ಲಿಯ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ಧರಂಬೀರ್ ಸಿಂಗ್ ಅವರನ್ನು ಆತಿಶಿ ಸೋಲಿಸಿದರು.
ಆತಿಶಿ, ಈ ದೇಶ ಕಂಡ ಮಹಿಳಾ ಸಿಎಂಗಳ ಸಾಲಿನಲ್ಲಿ 17ನೆಯವರು. ಇತರ ಮಹಿಳಾ ಸಿಎಂಗಳು ಯಾರೆಂಬುದನ್ನು ಗಮನಿಸೋಣ.
1. ಸುಚೇತಾ ಕೃಪಲಾನಿ: ಕಾಂಗ್ರೆಸ್ ನಾಯಕಿ. ಉತ್ತರ ಪ್ರದೇಶದ ಸಿಎಂ ಆಗಿ 1963ರ ಅಕ್ಟೋಬರ್ 2ರಂದು ತಮ್ಮ 55ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡರು. 3 ವರ್ಷ 162 ದಿನಗಳವರೆಗೆ ಹುದ್ದೆಯಲ್ಲಿದ್ದು, 1967ರ ಮಾರ್ಚ್ 13ರಂದು ಅಧಿಕಾರ ತೊರೆದರು.
ನಂದಿನಿ ಸತ್ಪತಿ: ಕಾಂಗ್ರೆಸ್ ನಾಯಕಿ. ಒಡಿಶಾ ಸಿಎಂ ಆಗಿ 1972ರ ಜೂನ್ 14ರಂದು ಅಧಿಕಾರಕ್ಕೇರಿ, 1976ರ ಡಿಸೆಂಬರ್ 16ರಂದು 45ನೇ ವಯಸ್ಸಿನಲ್ಲಿ ಅಧಿಕಾರ ತೊರೆದರು. ಅಧಿಕಾರದಲ್ಲಿದ್ದದ್ದು 4 ವರ್ಷ 185 ದಿನಗಳವರೆಗೆ.
3. ಶಶಿಕಲಾ ಕಾಕೋಧರ್: ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ನಾಯಕಿ. 1973ರ ಆಗಸ್ಟ್ 12ರಿಂದ 1979ರ ಎಪ್ರಿಲ್ 27ರವರೆಗೆ 5 ವರ್ಷ 258 ದಿನಗಳ ಕಾಲ ಗೋವಾ ಮುಖ್ಯಮಂತ್ರಿಯಾಗಿದ್ದರು.
4. ಅನ್ವರಾ ತೈಮೂರ್: ಕಾಂಗ್ರೆಸ್ ನಾಯಕಿ. 1980ರ ಡಿಸೆಂಬರ್ 6ರಂದು 46ನೇ ವಯಸ್ಸಿನಲ್ಲಿ ಅಸ್ಸಾಂ ಸಿಎಂ ಆಗಿ ಅಧಿಕಾರ ವಹಿಸಿಕೊಂಡು, 1981ರ ಜೂನ್ 30ರವರೆಗೆ 206 ದಿನಗಳ ಕಾಲ ಅಧಿಕಾರದಲ್ಲಿದ್ದರು. ಇವತ್ತು ಮುಸ್ಲಿಮ್ ದ್ವೇಷವನ್ನು ಬಿತ್ತುತ್ತಿರುವ ಬಿಜೆಪಿ ರಾಜಕಾರಣದಿಂದ ನಲುಗಿದಂತಿರುವ ಅಸ್ಸಾಂ, ದಶಕಗಳಷ್ಟು ಹಿಂದೆಯೇ ಮೊದಲ ಮುಸ್ಲಿಮ್ ಮಹಿಳಾ ಮುಖ್ಯಮಂತ್ರಿಯನ್ನು ಈ ದೇಶಕ್ಕೆ ಕೊಟ್ಟಿತ್ತು ಎಂಬುದು ವಿಶೇಷವಾಗಿ ಉಲ್ಲೇಖಿಸಬೇಕಿರುವ ಸಂಗತಿ.
5. ವಿ.ಎನ್.ಜಾನಕಿ: ಎಐಎಡಿಎಂಕೆ ನಾಯಕಿ. 1988ರ ಜನವರಿ 7ರಿಂದ 1988ರ ಜನವರಿ 30ರ ವರೆಗೆ 23 ದಿನಗಳಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.
6. ಜೆ. ಜಯಲಲಿತಾ: ಎಐಎಡಿಎಂಕೆ ನಾಯಕಿ. ತಮಿಳಿಗರ ಪಾಲಿಗೆ ಅಮ್ಮನಾದ ಕನ್ನಡತಿ. ಜಯಲಲಿತಾ ಅವರ ಸಿನೆಮಾ ಬದುಕು, ಎಂಜಿಆರ್ ಜೊತೆಗಿನ ಅವರ ಬಾಂಧವ್ಯ, ಆಮೇಲೆ ಆಕೆಯನ್ನು ತುಳಿದು ಹಾಕಲು ನಡೆದ ಪ್ರಯತ್ನಗಳು, ಅದನ್ನು ಆಕೆ ಮೆಟ್ಟಿ ನಿಂತು ತಮಿಳುನಾಡು ರಾಜಕೀಯವನ್ನು ದಶಕಗಳ ಕಾಲ ನಿಯಂತ್ರಿಸಿದ್ದು ಎಲ್ಲವೂ ಒಂದು ರೋಮಾಂಚಕಾರಿ ಕತೆ. ಸಿನೆಮಾ ಮಾಡಬಹುದಾದ್ದು, ಸಿನೆಮಾ ಆಗಿವೆ ಕೂಡ. ಅಷ್ಟೇ ಭ್ರಷ್ಟಾಚಾರ ಆರೋಪಗಳನ್ನೂ ಎದುರಿಸಿ ಜೈಲಿಗೂ ಹೋಗಿ ಬಂದು ಕೊನೆಗೆ ನಿಗೂಢವಾಗಿ ನಿಧನರಾದರು ಜಯಲಲಿತಾ.
ತಮಿಳುನಾಡು ಸಿಎಂ ಆಗಿ ಅಧಿಕಾರದಲ್ಲಿದ್ದ ಅವಧಿಗಳು: 1991ರ ಜೂನ್ 24ರಿಂದ 1996ರ ಮೇ 12; 2001ರ ಮೇ 14ರಿಂದ 2001ರ ಸೆಪ್ಟಂಬರ್ 21; 2002ರ ಮಾರ್ಚ್ 2ರಿಂದ 2006ರ ಮೇ 12; 2011ರ ಮೇ 16ರಿಂದ 2014ರ ಸೆಪ್ಟಂಬರ್ 27; 2015ರ ಮೇ 23ರಿಂದ 2016ರ ಡಿಸೆಂಬರ್ 5. ಅವರಒಟ್ಟು ಅಧಿಕಾರಾವಧಿ 14 ವರ್ಷ 124 ದಿನಗಳು.
7. ಮಾಯಾವತಿ: ಬಿಎಸ್‌ಪಿ ನಾಯಕಿ. ಉತ್ತರ ಪ್ರದೇಶದ ಸಿಎಂ ಆಗಿ ಅವರು ಅಧಿಕಾರದಲ್ಲಿದ್ದ ಅವಧಿಗಳು: 1995ರ ಜೂನ್ 13ರಿಂದ 1995ರ ಅಕ್ಟೋಬರ್ 18; 1997ರ ಮಾರ್ಚ್ 21ರಿಂದ 1997ರ ಸೆಪ್ಟಂಬರ್ 21; 2002ರ ಮೇ 3ರಿಂದ 2003ರ ಆಗಸ್ಟ್ 29; 2007ರ ಮೇ 13ರಿಂದ 2012ರ ಮಾರ್ಚ್ 15. ಅವರ ಒಟ್ಟು ಅಧಿಕಾರಾವಧಿ 7 ವರ್ಷ 6 ದಿನಗಳು. 8. ರಾಜಿಂದರ್ ಕೌರ್ ಬಟ್ಟಲ್: ಕಾಂಗ್ರೆಸ್ ನಾಯಕಿ. ಪಂಜಾಬ್ ಸಿಎಂ ಆಗಿ 1996ರ ನವೆಂಬರ್ 21ರಂದು 51ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡು, 1997ರ ಫೆಬ್ರವರಿ 12ರವರೆಗೆ 83 ದಿನಗಳ ಕಾಲ ಮುಂದುವರಿದಿದ್ದರು.
9. ರಾಬ್ರಿ ದೇವಿ: ಆರ್‌ಜೆಡಿ ನಾಯಕಿ. ಬಿಹಾರ ಸಿಎಂ ಆಗಿ ಅವರು ಅಧಿಕಾರದಲ್ಲಿದ್ದ ಅವಧಿಗಳು:1997ರ ಜುಲೈ 25ರಿಂದ 1999ರ ಫೆಬ್ರವರಿ 11; 1999ರ ಮಾರ್ಚ್ 9ರಿಂದ 2000 ಮಾರ್ಚ್ 2; 2000 ಮಾರ್ಚ್ 11ರಿಂದ 2005ರ ಮಾರ್ಚ್ 6ರವರೆಗೆ. ಅವರ ಒಟ್ಟು ಅಧಿಕಾರಾವಧಿ 7 ವರ್ಷ 190 ದಿನಗಳು.
10. ಸುಷ್ಮಾ ಸ್ವರಾಜ್: ಬಿಜೆಪಿ ನಾಯಕಿ. 1998ರ ಅಕ್ಟೋಬರ್ 12ರಂದು ದಿಲ್ಲಿ ಸಿಎಂ ಆದ ಅವರು, 1998ರ ಡಿಸೆಂಬರ್ 3ರವರೆಗೆ 52 ದಿನಗಳ ಕಾಲ ಹುದ್ದೆಯಲ್ಲಿದ್ದರು.
11. ಶೀಲಾ ದೀಕ್ಷಿತ್: ಕಾಂಗ್ರೆಸ್ ನಾಯಕಿ. 1998ರ ಡಿಸೆಂಬರ್ 3ರಂದು ದಿಲ್ಲಿ ಸಿಎಂ ಹುದ್ದೆಗೇರಿದ ಅವರು, 2013ರ ಡಿಸೆಂಬರ್ 28ರಂದು 75ನೇ ವಯಸ್ಸಿನಲ್ಲಿ ಅಧಿಕಾರ ತ್ಯಜಿಸಿದರು. ಅವರ ಅಧಿಕಾರಾವಧಿ 15 ವರ್ಷ 25 ದಿನಗಳು.
12. ಉಮಾಭಾರತಿ: ಬಿಜೆಪಿ ನಾಯಕಿ. 2003ರ ಡಿಸೆಂಬರ್ 8ರಿಂದ 2004ರ ಆಗಸ್ಟ್ 23ರವರೆಗೆ 259 ದಿನಗಳ ಕಾಲ ಮಧ್ಯಪ್ರದೇಶ ಸಿಎಂ ಆಗಿದ್ದರು.
16. ಮೆಹಬೂಬ ಮುಫ್ತಿ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ. 2016ರ ಎಪ್ರಿಲ್ 4ರಿಂದ 2018ರ ಜೂನ್ 19ರವರೆಗೆ 2 ವರ್ಷ 76 ದಿನಗಳ ಕಾಲ ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಸಿಎಂ ಆಗಿದ್ದರು. ಮೆಹಬೂಬ ಅವರ ತಂದೆ ಮುಫ್ತಿ ಮುಹಮ್ಮದ್ ಸಯೀದ್ ಕೂಡ ಜಮ್ಮು ಕಾಶ್ಮೀರ ಸಿಎಂ ಆಗಿದ್ದವರು. ಅವರು ದೇಶದ ಗೃಹ ಸಚಿವರಾಗಿದ್ದ ವೇಳೆ ಅವರ ಇನ್ನೋರ್ವ ಪುತ್ರಿ, ಮೆಹಬೂಬ ಸಹೋದರಿ ರುಬೈಯಾ ಸಯೀದ್ ಅವರನ್ನು 1989ರ ಡಿಸೆಂಬರ್ 8ರಂದು ಜೆಕೆಎಲ್‌ಎಫ್ ನಾಯಕ ಮುಹಮ್ಮದ್ ಯಾಸೀನ್ ಮಲಿಕ್ ಸೇರಿ ನಾಲ್ವರು ಉಗ್ರರು ಶ್ರೀನಗರದಲ್ಲಿ ಅಪಹರಿಸಿದ್ದರು. ಐದು ದಿನಗಳ ಬಳಿಕ ಬಂಧಿತ ಐವರು ಉಗ್ರರನ್ನು ಭಾರತ ಸರಕಾರ ಬಿಡುಗಡೆ ಮಾಡಿದ ಮೇಲೆ ರುಬೈಯಾ ಅವರನ್ನು ಉಗ್ರರು ಬಿಟ್ಟು ಕಳಿಸಿದ್ದರು.
ಇಷ್ಟೂ ಸಿಎಂಗಳ ಪೈಕಿ ಮಮತಾ ಬ್ಯಾನರ್ಜಿ ತಮ್ಮದೇ ಬಲದ ಮೇಲೆ ರಾಜಕೀಯವಾಗಿ ಬೆಳೆದವರಾದರೆ, ಮಾಯಾವತಿ ದಲಿತ ಚಳವಳಿಯನ್ನು ಮುನ್ನಡೆಸಿದ ನಾಯಕಿ. 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಶೀಲಾ ದೀಕ್ಷಿತ್ ದಿಲ್ಲಿಗೆ ನೀಡಿದ್ದ ಕೊಡುಗೆಗಳಿಗಾಗಿ ನೆನಪಾಗುವಂಥವರು. ವಸುಂಧರಾ ರಾಜೇ ಈಚಿನವರೆಗೂ ರಾಜಸ್ಥಾನ ರಾಜಕಾರಣದ ಮೇಲೆ ಗಮನಾರ್ಹ ಹಿಡಿತ ಹೊಂದಿದ್ದವರು. ಸುಷ್ಮಾ ಸ್ವರಾಜ್ ಕೆಲವೇ ಸಮಯ ಅಧಿಕಾರದಲ್ಲಿದ್ದರೂ ಗಮನ ಸೆಳೆದವರು. ಉಮಾಭಾರತಿ ಅವರಂತೂ ಬಿಜೆಪಿಯ ಫೈರ್‌ಬ್ರಾಂಡ್ ನಾಯಕಿಯಾಗಿ ವಿವಾದಗಳಿಂದಲೇ ಸುದ್ದಿಯಾಗುವವರು.
ದಿಟ್ಟ ಹೋರಾಟಗಾರ್ತಿ ಮಮತಾ:
ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಮಾತ್ರವಲ್ಲ, ದೇಶದಲ್ಲೇ 'ದೀದಿ' ಎಂದೇ ಖ್ಯಾತಿಯಿರುವ ಮಮತಾ ಬ್ಯಾನರ್ಜಿ ಸ್ವಯಂ ನಿರ್ಮಿತ ನಾಯಕಿ. ಎಷ್ಟು ಸರಳವೋ ಅಷ್ಟೇ ಮಹತ್ವಾಕಾಂಕ್ಷಿ. ಅವರೊಬ್ಬ ದಿಟ್ಟ ಹೋರಾಟಗಾರ್ತಿ ಎಂಬುದನ್ನು ಯಾರೂ ಅಲ್ಲಗಳೆಯುವುದು ಸಾಧ್ಯವಿಲ್ಲ.
ಅವರು 1984ರ ಲೋಕಸಭೆ ಚುನಾವಣೆಯಲ್ಲಿ ಸೋಮನಾಥ್ ಚಟರ್ಜಿ ಅವರನ್ನು ಸೋಲಿಸಿದ ನಂತರ ರಾಷ್ಟ್ರ ರಾಜಕಾರಣದಲ್ಲಿ ದೈತ್ಯ ಸಂಹಾರಿ ಆಗಿ ಮಿಂಚಿದರು. ಆದರೆ ಅಷ್ಟಕ್ಕೇ ನಿಂತುಬಿಡಲಿಲ್ಲ. ಬೀದಿಗಿಳಿದರು, ಏಟು ತಿಂದರು. ವಿಶ್ರಾಂತಿಯಿಲ್ಲದಷ್ಟು ಪ್ರಯಾಣಿಸಿದರು. ತಮ್ಮದೇ ಆದ ಸಹವರ್ತಿಗಳು ಮತ್ತು ಕಾರ್ಯಕರ್ತರ ಪಡೆಯನ್ನು ಕಟ್ಟಿದರು. ಕಡೆಗೂ ತಮ್ಮ ಗುರಿಯನ್ನು ತಲುಪಿಯೇಬಿಟ್ಟಿದ್ದರು. ಅವರು ಕೊಟ್ಟ ಹೊಡೆತ ಎಂಥದಿತ್ತೆಂದರೆ ದಶಕಗಳಿಂದ ಬೇರೂರಿದ್ದ ಎಡರಂಗ ಬುಡ ಮೇಲಾಗಿತ್ತು.
ಹೀಗೆ 2011ರಲ್ಲಿ ಎಡ ಪಕ್ಷವನ್ನು ಸೋಲಿಸುವುದಕ್ಕೂ ಮೊದಲು ಅವರು ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ ಮತ್ತು ತನ್ನನ್ನು ಬದಿಗೆ ಸರಿಸುವ ಪ್ರಯತ್ನಗಳಿಂದ ಸಿಟ್ಟಾಗಿದ್ದರು. ಕಾಂಗ್ರೆಸ್ ಎಂದಿಗೂ ಎಡಪಕ್ಷಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಮನವರಿಕೆಯಾಗಿತ್ತು. ಕಾಂಗ್ರೆಸ್‌ನಿಂದ ಹೊರನಡೆದು ಅವರು ಕಟ್ಟಿದ ತೃಣಮೂಲ ಕಾಂಗ್ರೆಸ್, ಬಂಗಾಳದ ರಾಜಕೀಯ ವ್ಯಾಕರಣವನ್ನೇ ಮರುರೂಪಿಸಿತು.
ಆ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಸರಕಾರದಿಂದ ನಿರ್ಮಿಸಲಾದ ಬಾವಿಗಳು ಮೇಲ್ಜಾತಿಯವರು ವಾಸಿಸುವ ಅನೇಕ ಹಳ್ಳಿಗಳ ಪಾಲಾಗಿದ್ದವು. ಸರಕಾರದ ಯೋಜನೆಗಳು ಅನುಸೂಚಿತ ಜಾತಿಗಳ ಜನರು ವಾಸಿಸುತ್ತಿದ್ದ ಹಳ್ಳಿಗಳನ್ನು ತಲುಪುವುದೇ ವಿರಳವಾಗಿತ್ತು. ಮಾಯಾವತಿ ಅಧಿಕಾರದಲ್ಲಿದ್ದಾಗ ಮಾತ್ರವಲ್ಲ, ತಮ್ಮ ರಾಜಕೀಯದ ಭಾಗವಾಗಿಯೇ ಬದಲಾವಣೆಗೆ ಆದ್ಯತೆ ಕೊಟ್ಟರು. ಸಾಮಾಜಿಕ ನ್ಯಾಯ ಮತ್ತು ದಲಿತ ಪರ ಪ್ರತಿಪಾದನೆ ಮುನ್ನೆಲೆಗೆ ಬಂತು.
ಇದೆಲ್ಲ ಹಿನ್ನೆಲೆಯಲ್ಲಿ ಅವರ ಇವತ್ತಿನ ನಿಷ್ಕ್ರಿಯತೆ ಒಂದು ದುರಂತದಂತೆ ಕಾಣಿಸುತ್ತದೆ. ಬಿಜೆಪಿಯನ್ನು ವಿರೋಧಿಸಲಾರದ ಸಂದಿಗ್ಧದಲ್ಲಿ ಸಿಲುಕಿದಂತಿರುವ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನೆಲ ಕಚ್ಚುವುದರೊಂದಿಗೆ ಪೂರ್ತಿ ಅಪ್ರಸ್ತುತರಾಗಿದ್ದಾರೆ. ಅವರ ಏಕಾಂಗಿ ಸ್ಪರ್ಧೆಯಿಂದ ವಿಪಕ್ಷಗಳ ಮತಗಳ ವಿಭಜನೆಯಾಗುತ್ತಿದೆ ಮತ್ತು ಅವರೂ ಗೆಲ್ಲುತ್ತಿಲ್ಲ. ಒಂದು ಕಾಲದಲ್ಲಿ ಬೆಂಕಿಯಂತಿದ್ದ ಬಿಎಸ್‌ಪಿ ಇಂದು ಶಕ್ತಿಹೀನವಾದಂತೆ ತೋರುತ್ತಿದೆ.
ದಿಲ್ಲಿಯನ್ನು ಪರಿವರ್ತಿಸಿದ ಶೀಲಾ ದೀಕ್ಷಿತ್:
15 ವರ್ಷ ದಿಲ್ಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ದೇಶದ ರಾಜಧಾನಿಯಲ್ಲೊಂದು ರೂಪಾಂತರವನ್ನೇ ತಂದವರು ಎನ್ನಲಾಗುತ್ತದೆ. ಸ್ವಚ್ಛವಾದ ಸಾರ್ವಜನಿಕ ಸಾರಿಗೆ, ದಿಲ್ಲಿ ಮೆಟ್ರೊ ಯೋಜನೆಯ ವಿಸ್ತರಣೆ ಮತ್ತು ಮೇಲ್ಸೇತುವೆಗಳ ನಿರ್ಮಾಣ ಈಎಲ್ಲದರಲ್ಲೂ ಅವರ ಪ್ರಯತ್ನಗಳು ವ್ಯಾಪಕ ಮೆಚ್ಚುಗೆ ಗಳಿಸಿದವು. ದಿಲ್ಲಿಗಾಗಿ ಮತ್ತದರ ನಿವಾಸಿಗಳ ಆಕಾಂಕ್ಷೆಗಳಿಗಾಗಿ ಹೃದಯದಿಂದ ಸೇವೆ ಸಲ್ಲಿಸಿದವರು ಎಂದೇ ಶಿಲಾ ದೀಕ್ಷಿತ್ ಅವರನ್ನು ಕೊಂಡಾಡಲಾಗುತ್ತದೆ.
ರಾಜಕೀಯವಾಗಿ ಬೆಲೆ ತೆತ್ತ ಫೈರ್ ಬ್ರಾಂಡ್ ಉಮಾಭಾರತಿ:
ಸನ್ಯಾಸಿನಿಯಂತೆ ಕಾಣಿಸಿಕೊಳ್ಳುವುದರಲ್ಲೂ ರಾಜಕೀಯ ಲಾಭ ಪಡೆದವರು ಬಿಜೆಪಿಯ ಉಮಾ ಭಾರತಿ. ಬಿಜೆಪಿಯ ಫೈರ್ ಬ್ರಾಂಡ್ ನಾಯಕಿಯಾಗಿದ್ದಕ್ಕೆ ರಾಜಕೀಯವಾಗಿ ಬೆಲೆಯನ್ನೂ ತೆತ್ತವರು. 2005ರಲ್ಲಿ ಅಶಿಸ್ತಿನ ಕಾರಣಕ್ಕಾಗಿ ಬಿಜೆಪಿಯಿಂದ ಹೊರಹಾಕಲ್ಪಟ್ಟ ಅವರು ಮತ್ತೆ ಬಿಜೆಪಿಗೆ ಬಂದದ್ದು 2011ರಲ್ಲಿ. ರಾಜಮನೆತನದ ಊಳಿಗಮಾನ್ಯ ನೆಲ ಮಧ್ಯಪ್ರದೇಶದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಮಿಂಚಿದ್ದ ಅವರಿಗೆ ತಾನೂ ರಾಜಕೀಯ ವನವಾಸ ಅನುಭವಿಸಬೇಕಾಗಿ ಬಂದೀತೆಂಬ ಊಹೆ ಕೂಡ ಇರಲಿಲ್ಲ. ಕರ್ನಾಟಕದ ಹುಬ್ಬಳ್ಳಿಯಲ್ಲಿ 1994ರ ಕೋಮು ಗಲಭೆಯಲ್ಲಿನ ಪಾತ್ರಕ್ಕಾಗಿ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದಾಗ ರಾಜೀನಾಮೆ ನೀಡಬೇಕಾಯಿತು. ಕಷ್ಟಪಟ್ಟು ಸಂಪಾದಿಸಿದ್ದನ್ನು ಬಿಡಬೇಕಾಗಿ ಬಂದಿತ್ತು. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪ್ರತಿಷ್ಠಾಪಿಸುವ ತನ್ನ ಪಕ್ಷದ ನಿರ್ಧಾರದ ವಿರುದ್ಧ ಬಂಡಾಯವೆದ್ದರು. ಆರೆಸ್ಸೆಸ್ ಕೃಪಾಕಟಾಕ್ಷವಿದ್ದ ಅವರು ವಿವಾದಗಳಲ್ಲಿ ಸಿಲುಕಿದ ಬಳಿಕ ಮಾತೃ ಸಂಘ ಅವರ ಬೆಂಬಲಕ್ಕೆ ಸಾಕಷ್ಟು ನಿಲ್ಲಲಿಲ್ಲ.
ವಸುಂಧರಾ ರಾಜೇ ಒಂಟಿತನ:
ಒಂದು ಕಾಲದಲ್ಲಿ ರಾಜಸ್ಥಾನದ ಅಗ್ರ ಮಹಿಳೆಯಂತಿದ್ದ, ಬಿಜೆಪಿಯಲ್ಲೂ ಅಷ್ಟೇ ಪ್ರಬಲರಾಗಿದ್ದ ನಾಯಕಿ ಇಂದು ಮೂಲೆಗುಂಪಾದ ಹಿರಿಯ ಬಿಜೆಪಿಗರಲ್ಲಿ ಒಬ್ಬರು. ರಾಜಸ್ಥಾನ ರಾಜಕಾರಣದಲ್ಲಿ ಅವರಿಲ್ಲದೆ ಏನೂ ಇಲ್ಲ ಎನ್ನುವ ಕಾಲ ಮುಗಿದುಹೋಗಿದೆ. ಮಗನ ರಾಜಕೀಯ ಭವಿಷ್ಯ ರೂಪಿಸುವುದಕ್ಕಾಗಿಯೇ ಅವರ ಶಕ್ತಿಯೆಲ್ಲ ವ್ಯಯವಾಗುತ್ತಿದೆ ಎಂಬ ಟೀಕೆಗಳೂ ಕೇಳಿಬಂದಿತ್ತು. ಒಂದು ದಶಕಕ್ಕೂ ಹೆಚ್ಚು ಕಾಲ ರಾಜಸ್ಥಾನದಲ್ಲಿ ಪಂಚಾಯತ್‌ನಿಂದ ಸಂಸತ್ತಿನವರೆಗಿನ ಎಲ್ಲಾ ಚುನಾವಣೆಗಳಿಗೆ ಪಕ್ಷದ ಟಿಕೆಟ್‌ಗಳನ್ನು ನಿರ್ಧರಿಸಿದವರಾಗಿದ್ದ ವಸುಂಧರಾ ಮಾತಿಗೆ ಈಗ ಯಾವ ಬೆಲೆಯೂ ಇಲ್ಲ. ಕಡೇ ಪಕ್ಷ ಅವರ ಅಭಿಪ್ರಾಯಗಳನ್ನು ಸೌಜನ್ಯಕ್ಕಾದರೂ ಪರಿಗಣಿಸುವವರಿಲ್ಲ. ಮೋದಿ-ಶಾ ಜೊತೆಗಿನ ವಸುಂಧರಾ ವೈಮನಸ್ಸು ಅವರ ರಾಜಕೀಯವನ್ನು ಹೆಚ್ಚು ಕಡಿಮೆ ಮುಗಿಸಿಬಿಟ್ಟಿದೆ.
ಬಿಕ್ಕಟ್ಟಿನ ಕಾಲದ ನಾಯಕಿ ಸುಷ್ಮಾ:
ಸುಷ್ಮಾ ಸ್ವರಾಜ್ ಅವರು 1998ರ ಅಕ್ಟೋಬರ್‌ನಲ್ಲಿ ದಿಲ್ಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ಅಧಿಕಾರದಲ್ಲಿ ಇದ್ದದ್ದು ಕೇವಲ 52 ದಿನಗಳಾದರೂ, ಅದು ಅವರ ವಿಶಿಷ್ಟ ರಾಜಕೀಯ ಜೀವನದಲ್ಲಿ ಮಹತ್ವದ ಮೈಲಿಗಲ್ಲು. ಬಿಜೆಪಿಯ ಆಂತರಿಕ ಅಸ್ಥಿರತೆ, ಗಗನಕ್ಕೇರಿದ್ದ ಈರುಳ್ಳಿ ಬೆಲೆ, ಜನರ ಅಸಮಾಧಾನದ ನಡುವೆಉಂಟಾದ ಬಿಕ್ಕಟ್ಟಿನ ಹೊತ್ತಲ್ಲಿ ಅವರು ನಾಯಕತ್ವವನ್ನು ಕೈಗೆ ತೆಗೆದುಕೊಳ್ಳಬೇಕಾಗಿ ಬಂದಿತ್ತು. 1998ರ ಅಸೆಂಬ್ಲಿ ಚುನಾವಣೆಗೆ ಸ್ವಲ್ಪ ಮೊದಲು ತಲೆದೋರಿದ್ದ ಆ ಪ್ರಕ್ಷುಬ್ಧತೆ ಹಿಂದಿನ ಇಬ್ಬರು ಬಿಜೆಪಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಕಾರಣವಾಗಿತ್ತು. ಸವಾಲಿನ ಕಾಲದಲ್ಲಿ ಸುಷ್ಮಾ ಸಾರಥ್ಯ ವಹಿಸಬೇಕಾಗಿತ್ತು. ಅವರ ಅಧಿಕಾರದ ಅಲ್ಪಾವಧಿ ಭಾರತದ ರಾಜಕೀಯದಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರಕ್ಕೆ ಸಾಕ್ಷಿಯಂತೆ ದಾಖಲಾಗಿದೆ.
ಈಗ, ಅದಾಗಿ 26 ವರ್ಷಗಳ ನಂತರ ಅದೇ ದಿಲ್ಲಿಗೆ ಮತ್ತೊಮ್ಮೆ ಮಹಿಳಾ ಲೀಡರ್ ಸಿಎಂ ಆಗಿದ್ದಾರೆ. ಆತಿಶಿ ಕೂಡ ಸಿಎಂ ಹುದ್ದೆ ವಹಿಸಿಕೊಂಡಿರುವುದು ಬಿಕ್ಕಟ್ಟಿನ ಹೊತ್ತಿನಲ್ಲಿಯೇ ಎಂಬುದು ಗಮನೀಯ. ಸುಷ್ಮಾ ಅವರಂತೆಯೇ ಅತಿಶಿ ಕೂಡ ಪಕ್ಷದೊಳಗಿನ ಬಿಕ್ಕಟ್ಟಿನ ಸಮಯದಲ್ಲಿ ನಿರ್ಣಾಯಕ ಅಸೆಂಬ್ಲಿ ಚುನಾವಣೆಗಳಿಗೆ ಕೆಲವೇ ತಿಂಗಳುಗಳ ಮೊದಲು ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು.